ದೇವನಿರುವಿಕೆ (ಶ್ರೀನರಸಿಂಹ 19)
ದೇವನಿಹನೋ ಇಲ್ಲವೋ ಎನ್ನುವ ಜಿಜ್ಞಾಸೆಯೇತಕೆ
ದೇವನಿರಲಿ ಇಲ್ಲದಿರಲಿ ಹಾನಿಯೇನಿಲ್ಲವೋ ಜಗಕೆ
ಇರುವನೆಂದೆನಿಸೆ ನಂಬಿ ನೀ ಭಕ್ತಿಯಲಿ ಶರಣಾಗು
ಇಲ್ಲವವನೆನಿಸೆ ಸ್ವಶಕ್ತಿಯ ನಂಬಿ ಜೀವನದಿ ಸಾಗು
ವಿವಿಧ ಮಡಕೆಗಳ ಸೃಷ್ಠಿಯ ಹಿಂದಿಹನು ಕುಂಭಾರ
ಜಗದ ಸೃಷ್ಠಿಗೂ ಅಂತೆ ದೇವನೇ ಆಗಿಹನು ಆಧಾರ
ನಂಬಿಯಾದರು ಇರು,ನಂಬದಂತಾದರೂ ನೀ ಇರು
ನಂಬಿಯೂ ನಂಬದಿಹ ಸ್ಥಿತಿಯಲಿ ಮನಸನಿರಿಸದಿರು
ಎಲ್ಲ ಅರಿತಿಹೆನೆಂಬಹಮಿಕೆಯಲಿ ಅವನ ಮರೆತರು ನೀನು
ಕೈ ಹಿಡಿದು ಸಲಹುವನು ಶ್ರೀನರಸಿಂಹ ಕರುಣಾಳು ಅವನು
No comments:
Post a Comment