Showing posts with label ಸತೀಶ - ಶ್ರೀನರಸಿಂಹ. Show all posts
Showing posts with label ಸತೀಶ - ಶ್ರೀನರಸಿಂಹ. Show all posts

ಭಯ-ಅಭಯ (ಶ್ರೀ ನರಸಿಂಹ 63)


ಭಯ-ಅಭಯ (ಶ್ರೀ ನರಸಿಂಹ 63)

ನಡೆಯಲ್ಲಿ  ತಪ್ಪುಗಳಾಗುವುದೆನುವ ಭಯವಿರಬೇಕು
ನುಡಿವಾಗ ಪರಮನ ನೋವುದೆನುವ ಭಯವಿರಬೇಕು
ಕುಕರ್ಮಗಳಿಂದ ಜಗಕೆ ಕೆಡುಕೆನುವ ಭಯವಿರಬೇಕು
ವಾಮಮಾರ್ಗ ಗಳಿಕೆ ಉಳಿಯದೆಂಬ ಭಯವಿರಬೇಕು

ಅಳಿಯಲೇ ಬೇಕೀ ಕಾಯ ಮರಣದ ಭಯ ಬಿಡಬೇಕು
ಸಾಧನೆಯ ಹಾದಿಯಲಿ ಕಷ್ಟವೆನುವ ಭಯ ಬಿಡಬೇಕು
ಬಯಸಿದುದೆಲ್ಲ ಸಿಗಲಿಲ್ಲ ಹೇಗೆನುವ ಭಯ ಬಿಡಬೇಕು
ಸಲಹುವನು ಶ್ರೀಹರಿ ಮುಂದೇನೆಂಬ ಭಯ ಬಿಡಬೇಕು

ಭಯವಿರಬೇಕು ಜೀವನದಿ,ಜೀವನವೇ ಭಯವಾಗದಂತಿರಬೇಕು
ಮನಕ್ಲೇಷಗಳು ಕಳೆಯೆ ಶ್ರೀನರಸಿಂಹನ ಅಭಯ ನಮಗಿರಬೇಕು

ನಿಂತ ನೀರಾಗದಿರು (ಶ್ರೀ ನರಸಿಂಹ 62)


ನಿಂತ ನೀರಾಗದಿರು ನೀನು ಸಾಧನೆಯ ಹಾದಿಯಲಿ
ನಿನ್ನಲ್ಪ ಮತಿಗೆ ತಿಳಿದುದನೆ ನೀ ಸತ್ಯವೆಂದೆನುತಲಿ
ಎಲ್ಲವನು ಅರಿತಿಹೆನೆಂಬಹಮಿಕೆಯಲಿ ಮೆರೆಯದಿರು
ಎಲ್ಲವನು  ಜರಿಯುತಲೆಲ್ಲರನು ನೀ  ನಿಂದಿಸದಿರು

ಎಲ್ಲದರಲಿ, ಎಲ್ಲರಲಿ ಸಮದೃಷ್ಠಿಯನು ಇರಿಸೆಂದು
ಗೀತೆಯಲಿ ಪರಮಾತ್ಮ ಶ್ರೀಕೃಷ್ಠ ನುಡಿದಿಹನಂದು
ತಿಳಿಯದಲೆ ವೇದ, ಗೀತೆಗಳ ಪೂರ್ಣ ಸಾರವನು
ಸರಿಯಿಲ್ಲವವೆನುತಲಿ ಜರಿಯದಿರು  ಅವುಗಳನು

ಸುಡುವ ಬೆಂಕಿಯನೆ ಬೆಳಕೆನುತಲಿ ನಂಬದಿರು ನೀನು
ನಂಬು,ನಂಬದಿರು ಶ್ರೀ ನರಸಿಂಹ ಸಲಹುವನೆಲ್ಲರನು

ಮಾನವ ಜನ್ಮ (ಶ್ರೀ ನರಸಿಂಹ 61)


ಇಂದ್ರಿಯಗಳ ಬಯಕೆ  ತಣಿಪುದೆ ಸುಖವೆಂದೆನುತ
ಮನವು ಹೊರಗೆ ತಿರುಗುತಿದೆ ಗುರಿಯ ಮರೆಯುತ
ತಪ್ಪಗಳಾಗುವುದದು ಸಹಜ ಸಾಧನೆಯ ಹಾದಿಯಲಿ
ತಿದ್ದಿಕೊಂಡಡಿಯನಿಡಬೇಕು ತಪ್ಪುಗಳ ತೊರೆಯುತಲಿ

ಜೀವನದನುಭವಗಳಿಂದಲಿ ಪಕ್ವವಾಗಬೇಕು ಮನವು
ಸಾಧನೆಯ ಹಾದಿಯಲಿ ಸಿಗುವುದಿದರಿಂದ  ಗೆಲುವು
ಮನಸ ನೀ  ಮನಸಿನಿಂದಲೆ ನಿಗ್ರಹಿಸ  ಬೇಕಿಹುದು
ಜಪ, ತಪ, ಪೂಜೆಗಳೆಂಬುವವು ಇದಕೆಂದೆ ಇಹುದು

ಅತಿ ದುರ್ಲಭವು ನಮಗೆ ದೊರಕಿರುವ ಈ ಮಾನವನ ಜನ್ಮವು
ಮುಕ್ತಿ ಗಳಿಸಲೋಸುಗವೆ ಶ್ರೀ ನರಸಿಂಹನೆಮಗೆ ನೀಡಿಹ ವರವು

ಅಜ್ಞಾನದಂದಕಾರ (ಶ್ರೀ ನರಸಿಂಹ 60)


ಉರಿವ ಭಾಸ್ಕರನ ಮೋಡದ ತುಣುಕು ಮುಚ್ಚುವಂತೆ
ಅಜ್ಞಾನವೆಮ್ಮ  ನಿಜ ಸ್ವರೂಪವನು ಮುಸುಕಿಹುದಂತೆ
ಮುಚ್ಚಿದರು ಭಾಸ್ಕರನ ನಶಿಸಲಾಗದದನು ಮೋಡಕೆ
ನಾಶಪಡಿಸಲಾಗದಂತೆ ನಿಜ ಸ್ವರೂಪವನು ಅಜ್ಞಾನಕೆ

ಮುಚ್ಚಿದ  ಮೋಡ ಸರಿಯೆ  ರವಿಯು ಪ್ರಕರಿಸುವಂತೆ
ಅಜ್ಞಾನ ಕಳೆಯಲೆಮ್ಮ ನಿಜ  ಸ್ವರೂಪದ  ಅರಿವಂತೆ
ಮೋಡವನು ಸರಿಸೆ ವಾಯುವೆಂಬುದು ಬೇಕಿಹುದು
ಅಜ್ಞಾನವದು ಕಳೆಯೆ  ಭಕ್ತಿಯೆನುವುದೆ ಸಾಕಿಹುದು

ಅಜ್ಞಾನದಂದಕಾರದಿ ಮುಳುಗಿ ತೊಳಲಾಡುತಿಹುದು ಮನಸು
ಜ್ಞಾನದ ಬೆಳಕ ನೀಡುತಲಿ ಶ್ರೀ ನರಸಿಂಹ ನೀ ನಮ್ಮ ಹರಸು

ಏಕೆ, ಹೇಗೆ ಎನುವ ಪ್ರಶ್ನೆ (ಶ್ರೀ ನರಸಿಂಹ 59)


ಜಗವನು ನೋಡಿ ಏಕೆ, ಹೇಗೆ ಎನುವ ಪ್ರಶ್ನೆ ಮನದಿ
ಅದಕುತ್ತರವ ಹುಡುಕಲೆತ್ನಿಸುವುದು ಮನ ತವಕದಿ
ಇದಲ್ಲ, ಹೀಗಲ್ಲವೆನುತಲದು ತರ್ಕಗಳ ಮಾಡುತಲಿ
ಉತ್ತರ ಸಿಗದೆ ತೊಳಲಾಡುವುದದು ಜಿಜ್ಞಾಸೆಯಲಿ

ಸಾಗರದಾಳ ತಿಳಿಯಲೆತ್ನಿಪ ಉಪ್ಪಿನ ಗೊಂಬೆಯಂತೆ
ಸೃಷ್ಠಿ ರಹಸ್ಯವ  ತಿಳಿಯಲೆತ್ನಿಪ ನಿನ್ನ  ಪ್ರಯತ್ನವಂತೆ
ಏಕೆ, ಹೇಗೆಂಬುವುದಕೆ ಉತ್ತರ ದೊರಕಿದಂದು ನಿನಗೆ
ಉಪ್ಪಿನ ಗೊಂಬೆಯ ತೆರದಿ ಹೇಳಲಾಗದದ ಪರರಿಗೆ

ಎಲ್ಲ ಅವನಿಚ್ಚೆಯೆನುತಲಿ ಸಾಧನೆಯ ಹಾದಿಯಲಿ ಇರು ನೀನು
ಕಾಲ ಬರಲಾಗ ಶ್ರೀ ನರಸಿಂಹ ನೀಡುವ ನಿನಗೆಲ್ಲದರ ಅರಿವನು

ಜಗದಿ ನಿನ್ನಿರುವಿಕೆ (ಶ್ರೀ ನರಸಿಂಹ 58)


ಮುಖ್ಯವಾದವರೇನಾಗಿಲ್ಲ ನಾವುಗಳು ಈ ಜಗಕೆ
ಅನಿವಾರ್ಯ  ಕೂಡವೇನಿಲ್ಲ ಇಲ್ಲಿ  ನಮ್ಮಿರುವಿಕೆ
ನಮ್ಮಿರಿವು ಈ ಜಗದಲ್ಲಿ ನೆಪ ಮಾತ್ರವಾಗಿಹುದು
ನಾವಿರಲಿ,ಇಲ್ಲದಿರಲಿ ಈ ಜಗವು ನಡೆಯುತಿಹುದು

ನಮ್ಮ ಜೀವನದ ಪಯಣ ಮುಗಿದ ದಿನದಂದು
ಸನಿಹದವರನು ಬಿಟ್ಟದು  ಜಗಕೆ ತಿಳಿಯದೆಂದು
ಜಗಕೊಳಿತಾಗುವ ಸಾಧನೆಯ ನೀ ಮಾಡಬೇಕು
ನಿನ್ನಳಿವಿನ  ನಂತರವು ಜಗದಿ ನೀ ಬಾಳ  ಬೇಕು

ಜಗವೆ ನೀಡುತಿಹುದು ನಮಗೆಲ್ಲವನು,ಜಗಕೆ ನೀ ನೀಡದನು
ಸ್ಮರಿಸನವರತ ಜಗಕೊಡೆಯ ಶ್ರೀನರಸಿಂಹನ ನಾಮವನು

ದೇವ ದರ್ಶನದ ಅನುಭವ (ಶ್ರೀ ನರಸಿಂಹ 57)


ಕಣ್ಣಿಗೆ ಕಾಣನು, ಸ್ಪರ್ಶಕೆ ಸಿಲುಕನು ದೇವನೆನದಿರು
ಅವನಿರುವಿಕೆಯನೆ ಸಂಶಯದಲಿ ನೀ ಜರಿಯದಿರು
ದೇವನಿರುವಿಕೆ ಕಂಡವರಾರಿಹರೆಂದು ನೀ ಕೇಳದಿರು
ವೇಧ,ಪುರಾಣಗಳು ಬರಿಯ ಕಟ್ಟು ಕಥೆಗಳೆನ್ನದಿರು

ಕಂಡು,ಮುಟ್ಟಿರುವೆಯೇನು  ನಿನ್ನ ಪೂರ್ವಜರ ನೀನು
ನಂಬುವುದಿಲ್ಲವೆ ನೀ ಕಂಡು,ಮುಟ್ಟಿದವರ ಮಾತನು
ಸಾಧಕರ ಅನುಭವದ ನುಡಿಗಳಂತೆ,ನೀ ನಂಬಬೇಕು
ಸಾಧನೆ ಮಾಡಿ ನೀ ದೈವಾನುಭವವ ಪಡೆಯಬೇಕು

ಮನಸಿನ ನಂಬಿಕೆಯೆಂಬುದದು ಸಾದನೆಗೆ ಬಹು ದೊಡ್ಡ ಶಕ್ತಿ
ನೀಡುವನು ದರ್ಶನಾನುಭವವ ಇಡು ಶ್ರೀ ನರಸಿಂಹನಲಿ ಭಕ್ತಿ

ಶರಣಾಗತಿ (ಶ್ರೀ ನರಸಿಂಹ 56)


ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ
ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ
ಇಂದಾಗಿಹ ಘಟನೆಯಿಂದಲಿ  ದುಃಖ ನಿನಗಾದರು
ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು

ನೀ ಬಯಸಿದುದನು ಬಯಸಿದಾಗಲೆ ನೀಡನವನು
ಬೇಡವೆನಿಸುವುದನೆ ನೀಡಿ ನಿನ್ನನವನು ಪರಿಕಿಪನು
ಶರಣಾಗು ಶ್ರೀಹರಿಗೆ  ಬಯಕೆಗಳ ತ್ಯಜಿಸಿ ಮನದಿ
ರಕ್ಷಿಪನು ನಿನ್ನ ಮಾರ್ಜಾಲ ಮರಿಯ ರಕ್ಷಿಪ ತೆರದಿ

ನಿನ್ನ ಕರದಿ ದೇವನ ಕರ ಹಿಡಿದಿರಲು ಇಹುದು ಭಯವು
ಇಡೆ ಕರವನು ಶ್ರೀನರಸಿಂಹನ ಕರದೊಳಾಗ ಅಭಯವು

ವಂದನೆ-ನಿಂದನೆ (ಶ್ರೀ ನರಸಿಂಹ 55)


ವಂದಿಸಿದರು ಸರಿ, ನಿಂದಿಸಿದರು ಸರಿ ನೀ ದೇವನನು
ವಂದಿಸಿದರು, ನಿಂದಿಸಿದರು ಸ್ಮರಿಸಲೇ ಬೇಕವನನು
ಇಹನವನೆಂದು ನಂಬಿದರು ನೀ ಅವನನೆ ಸ್ಮರಿಸುವೆ
ಇಲ್ಲವವನೆನುವಾಗಲು ನೀ  ಅವನ ಹೆಸರ ಹೇಳುವೆ

ನಿನ್ನಂತೆ ನಡೆದಾಗವನ  ವಂದಿಸುತ ಸ್ಮರಿಸುವುದೇಕೆ
ನಡೆಯದಿರೆ ಕೋಪದಲಿ  ನಿಂದಿಸುತ ತೆಗಳುವುದೇಕೆ
ವಂದಿಸಿದರು,ನಿಂದಿಸಿದರು ನಿನ್ನ ಕೈ ಬಿಡನು ಅವನು
ಇಹನೆಂದರು, ಇಲ್ಲವವನೆಂದರು  ಸಲಹುವವನವನು

ವಂದಿಸಿದಿರು,ನಿಂದಿಸಿದರು ಸ್ಮರಿಸುತಿರುವೆವವನ ಮನಸಿನಲಿ  
ಕೈಬಿಡದೆ ಸಲಹುವನೆಲ್ಲರ ಶ್ರೀ ನರಸಿಂಹ ಹಗಲು ಇರುಳಿನಲಿ

ಮನಸೆಂಬ ಮರ್ಕಟ (ಶ್ರೀ ನರಸಿಂಹ 54)


ಮನಸೆಂಬ ಮರ್ಕಟ (ಶ್ರೀ ನರಸಿಂಹ 54)

ರಚನೆ : ಸತೀಶ ತುಮಕೂರು


ಹುರಿದು ಬಿತ್ತಿದ ಬೀಜದಿಂದ ಫಲ ಪಡೆಯಲಾಗದಂತೆ
ಚಂಚಲ ಮನಸಲಿ ಗೈವ ಪೂಜೆ, ಜಪತಪಗಳು ಅಂತೆ
ಹುರಿದು ಬಿತ್ತಿದ ಬೀಜಕೆ ನೀರೆರೆದರೂ  ಬೆಳೆ ಕೊಡದು
ಮನಸ ನಿಗ್ರಹಿಸದೆ ಸಾಧನೆಯಲಿ ಗುರಿ ಸೇರಲಾಗದು

ಹಸನಾಗಿಹ ಬೀಜವನು ಬಿತ್ತಿ ಬೆಳೆಯ ನೀ ಪಡೆವಂತೆ
ಸುಯೋಚನೆಗಳಲೇ ನೀ ಮನಸ ತೊಡಗಿಸ ಬೇಕಂತೆ
ಹಸುವನು ಕಟ್ಟುವ ತೆರದಿ ನೀ ಮನಸ ಹಿಡಿದಿಡಬೇಕು
ಅಸಾಧ್ಯವೇನಲ್ಲವಿದು ಅಭ್ಯಾಸದಿಂದಲಿ ಸಾಧಿಸಬೇಕು

ಮನವು ಮರ್ಕಟನ ತೆರದಿ ಚಂಚಲವೆಂಬುವುದದು ಸಹಜವು
ಹಿಡಿದಿಡಲದನು ಸಾಧನವಾಗಿಹುದು ಶ್ರೀನರಸಿಂಹನ ಜಪವು

ಪರಮಾತ್ಮನನುಭವ (ಶ್ರೀ ನರಸಿಂಹ 53)


ಬಿಳಿಯ ಪರದೆಯ ಮೇಲೆ ಚಿಕ್ಕ ಗುರುತನು ಮಾಡೆ
ಕಾಣಿಸುವುದದು ಕಣ್ಣಿಗೆ ಬಳಿ ನಿಂತು ನೀನದ ನೋಡೆ
ತುಸು ದೂರ ನಿಂತು ನೀ ನೋಡ ಬಯಸಿದರೆ ಅದನು
ನೀನಿಟ್ಟಿಹ  ಗುರುತದು ನಿನ್ನಕ್ಷಿಗಳಿಗೆ ಕಾಣುವುದೇನು

ದೂರದಲಿ  ನಿಂತು ನೀ ಗುರುತನು  ನೋಡುವ ತೆರದಿ
ಪರಮಾತ್ಮನ  ಹುಡುಕದಿರು ನೀ ಇಹನೆಂದು ದೂರದಿ
ಹೊರಗಲೆಯುತಿಹ ಮನವ ನೀ ಒಳ ತಂದು ನಿಲಿಸು
ಪರಮಾತ್ಮ ದರುಶನದನುಭವ  ಪಡೆವುದು ಮನಸು

ಬೆರಸಿದರೆ ಮನಸ ಉಸಿರಿನೊಳಗೆ,ನಿಲುವುದು ಮನ ಒಳಗೆ
ಸಾದಿಸಲಿದನು ಸುಲಭವು ಶ್ರೀ ನರಸಿಂಹನ  ದರ್ಶನ  ನಿನಗೆ

ಕರ್ಮಾಗ್ನಿ (ಶ್ರೀ ನರಸಿಂಹ 52)


ಅರಿಯದಲೆ ಮುಟ್ಟಿದರು  ಅಗ್ನಿಯೆಂಬುದನು ನೀನು
ಅರಿಯದೆ ಮುಟ್ಟಿಹನೆಂದು ಸುಡದೆ ಬಿಡುವುದೇನು
ಅರಿತೊ,ಅರಿಯದೆಯೊ ಹೇಗೆ ಮುಟ್ಟಿದರು ಅದನು
ಗುಣವದರದು ತಿಳಿ,ಸುಡುವುದದು ಮುಟ್ಟಿದವರನು

ಅರಿತು,ಅರಿಯದೆ ಮಾಡಿದರು ಅಹಿತ ಕರ್ಮಗಳನು
ನೀಡುವುದದು ನೀ ಬಯಸದಿಹ ಕೆಡುಕಿನ ಪಲಗಳನು
ಅರಿಯದೆ ಆಗಿಹ  ಅಹಿತಕೆ ಕ್ಷಮೆಯೂ ದೊರಕಿದರು
ಅರಿತು  ಮಾಡುವ ಅಹಿತಕೆ ಕ್ಷಮೆಯಿಲ್ಲ ಕೋರಿದರು

ಮಾಡದಿರು ಕರ್ಮಗಳ ಜಗದಿ ಪರರ ಮನ ನೋಯಿಸಲು
ಇದುವೆ ಸುಲಭ ಮಾರ್ಗವು ಶ್ರೀನರಸಿಂಹನನು ಮೆಚ್ಚಿಸಲು

ಉಪದೇಶ-ಪಾಲನೆ


 ಉಪದೇಶಗಳನು ಹೇಳುವವರೆ,ಕೇಳುವವರೆ ಎಲ್ಲ
ಅದ ಪಾಲಿಸುವವವರಿಂದು  ಮರೆಯಾಗುತಿಹರಲ್ಲ
ತುಟಿಗಳಂಚಲಿ ಮಾತ್ರ ಜಪಿಸುತಲಿ ರಾಮ ನಾಮ
ಒಳಗೆ  ಮನಸಲಿ ತುಂಬಿಹುದು ನೂರೆಂಟು  ಕಾಮ

ದಾಸರಂದರು  ಅಂದು  ಸತ್ಯವಂತರಿಗಿದು ಕಾಲವಲ್ಲ
ಸೋಜಿಗವು ಸತ್ಯವಂತ  ನಾನೆಂದುಕೊಳ್ಳುವೆವು ಎಲ್ಲ
ನಮ್ಮೊಳು ತುಂಬಿಹ ದೃಷ್ಟತನವ ಅರಿಯಬೇಕಿಹುದು
ಅದನಳಿಸಿ ಸಾತ್ವಿಕತೆಯ ಮನದಿ ಬೆಳಸಬೇಕಿಹುದು

ಉಪದೇಶಿಸುವ ಮುನ್ನ ನೀ ಅಳವಡಿಸಿಕೋ ಉಪದೇಶವನು
ಮೆಚ್ಚುವನು ಶ್ರೀ ನರಸಿಂಹ ವಿನಯ ತುಂಬಿರುವ ಮನಸನು

ಮನಸಿನ ನಿಗ್ರಹ (ಶ್ರೀ ನರಸಿಂಹ 50)


ಬೆಳಕಿನ  ಕಿರಣಗಳು  ಚದುರಿ ಎಲ್ಲಡೆ ಪಸರಿಸಿರುವಂತೆ
ವಿಷಯಾಸಕ್ತಿಯಲಿ ಮನವು ಹೊರಗೆ  ತಿರುಗಿಹುದಂತೆ    
ಮನಸು  ಚಲಿಸುವ ವೇಗವದು ಬೆಳಕಿಗೂ  ಮೀರಿದುದು
ಕ್ಷಣಮಾತ್ರದಿ ತಾ ಬಯಸಿದೆಡೆಗೆ ಚಲಿಸುವುದು ಅದು

ಚದುರಿರುವ ಬೆಳಕ ಕಿರಣಗಳ ಒಂದೆಡೆ ಸೇರಿಸಿದಂತೆ
ಶಕ್ತಿಯ ರೂಪದಲ್ಲಿ ಬಳಸಬಹುದದನು  ನಿನ್ನಿಚ್ಚೆಯಂತೆ
ಹೊರಗಲೆದಾಡುತಿಹ ಮನವ ನಿಗ್ರಹಿಸಿ ಏಕಾಗ್ರಗೊಳಿಸು
ಪಡೆಯಬೇಕಿರೆ  ಆತ್ಮಾನುಭವವ ನೀ ಇದನು ಸಾಧಿಸು

ಮಾಡುವ ಎಲ್ಲ ಸಾಧನೆಗಳು ಮನವ ನಿಗ್ರಹಿಸಲೋಸುಗವೆ
ಶ್ರೀ ನರಸಿಂಹನ  ಕೃಪೆ  ದೊರೆಯೆ ನೀ ಇದನು ಸಾಧಿಸುವೆ   

ಮಾಯಾ ಭ್ರಮೆ (ಶ್ರೀ ನರಸಿಂಹ 49)


ಮಾಯಾ ಭ್ರಮೆ (ಶ್ರೀ ನರಸಿಂಹ 49)


ಭೂಮಿಗಳತೆ ಮಾಡಿ ನನ್ನದಿದೆಂದು ಪತ್ರವನು ಬರೆಸಿ
ಅದಕೊಡೆಯ ನಾನೆಂದು ಮೆರೆಯುತಲಿ ಸಂಭ್ರಮಿಸಿ
ಹಣವೆನುತ ಲೋಹ,ಕಾಗದದ ಮೇಲೆ ಚಿತ್ತಾರ ಬಿಡಿಸಿ
ಕೂಡಿಡುತಲಿಹೆವದನು ಸುಖ ಪಡೆವೆವೆಂದು ಭ್ರಮಿಸಿ

ನಿನ್ನದಲ್ಲದ ಎಲ್ಲವನು ಉಪಯೋಗಿಸುತಿರುವೆ ನೀನಿಲ್ಲಿ
ನಿನ್ನಂತೆ  ಬಂದಿಹರಿಲ್ಲಿ ಪರರೆಂಬುವ ಅರಿವಿರಲಿ ನಿನ್ನಲ್ಲಿ
ತಿಳಿ ನೀನು ನೀನಿರುವ ಈ ದೇಹವಿದು ಕೂಡ ನಿನದಲ್ಲ
ನಾನು,ನನದೆನ್ನದಿರು ದೇವನದು ಈ ಜಗದಲಿಹುದೆಲ್ಲ

ಭ್ರಮೆಗೊಳಗಾಗಿಹುದು ಮನವು ದೇವನ ಮಾಯಾ ಲೀಲೆಯಿಂದ
ನಂಬು  ಶ್ರೀ ನರಸಿಂಹನನು ಬಿಡಿಸುವನು ಮಾಯಾ ಭ್ರಮೆಯಿಂದ

ಕಾಲದ ಚಕ್ರ (ಶ್ರೀ ನರಸಿಂಹ 48)


ಕಾಲದ ಚಕ್ರ (ಶ್ರೀ ನರಸಿಂಹ 48)







ಕಾಲವೆಂಬುವುದದಕೆ ಆದಿ,ಅಂತ್ಯಗಳೆಂಬುವುದಿಲ್ಲ
ಎಲ್ಲದಕೂ ಸಾಕ್ಷಿಯಾಗಿಯೂ ಕಾರಣವದೇನಾಗಿಲ್ಲ
ಜಗದ ಈ ಸೃಷ್ಟಿಗೂ ಮುನ್ನ,ಸ್ಥಿತಿಯಲ್ಲಿ,ನಂತರವು
ಕಾಲದ ಇರುವೆಂಬುವುದದು ಎಂದಿಗೂ ಶಾಶ್ವತವು
 
ಕಾಲವೆಂಬುವುದನು ಎದುರಿಸಿ ನಿಂತವರಾರಿಹರು
ಅದರೆದುರು  ಮಂಡಿ ಊರಲೇ ಬೇಕಿಹುದೆಲ್ಲರು
ಕಹಿ ಘಟನೆಗಳ ಕಂಡು ನೀ ಮನದಿ ಮರುಗದಿರು
ಕಾಲವದಕೆ ಉತ್ತರಿಪುದು ಚಿಂತೆಯ ಮಾಡದಿರು
 
ಕಾಲವೆಂಬುವುದು ಚಕ್ರದ ತೆರದಿ ಅನವರತವು ತಿರುಗುತಿಹುದು
ಮುಕ್ತಿ ಪಡೆಯಲಿದರಿಂದ ಶ್ರೀ ನರಸಿಂಹನ ಕೃಪೆಯು ಬೇಕಿಹುದು 

ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)

ರಚನೆ : ಸತೀಶ ತುಮಕೂರು

ವಿವಿಧ ರೂಪದಲಿ ಆಭರಣಗಳ ಮಾಡಿದರೇನು
ಲೋಹ ಬಳಸಿರುವುದದಕೆ  ಒಂದೆ ಅಲ್ಲವೇನು 
ವಿವಿಧ ಹೆಸರಿನ ಪಾತ್ರಗಳ ನಟನು ಮಾಡಿದರು
ಮೂಲ ನಾಮದಲೆ ಅವನ ಎಲ್ಲ ಕರೆಯುವರು
 
ದೇವ ಸೃಷ್ಠಿಯೊಳಂತೆ  ವಿವಿಧ ದೇಹಗಳಿಹುದು
ಎಲ್ಲ ದೇಹದೊಳಗಿರುವ ಶಕ್ತಿ ಒಂದೆ ಆಗಿಹುದು
ಮನಸಿನಹಮಿಕೆಯಿಂದಲಿ ಬೇಧ ಕಾಣುವುದು
ನಾನು ನನದೆಂಬುವುದಳಿಯೆ ಬೇಧ ಎಲ್ಲಿಹುದು
 
ಜಗದಲಿಹ ಜೀವಗಳೆಲ್ಲ ನಿನ್ನಂತೆ ಎಂಬುವುದನರಿಯಬೇಕು
ಎಲ್ಲರಲಿ, ಎಲ್ಲದರಲಿ ಶ್ರೀ ನರಸಿಂಹನನು ನೀ ಕಾಣಬೇಕು

ತತ್ವೋಪದೇಶಗಳು (ಶ್ರೀ ನರಸಿಂಹ 46)

ರಚನೆ : ಸತೀಶ ತುಮಕೂರು


ಜೀವ,ಬ್ರಹ್ಮಗಳೊಂದೆ ಆಗಿಹುದೆನುವುದು ಅಧ್ವೈತವು
ಬ್ರಹ್ಮನಂಶಗಳೆ ಜೀವಗಳೆನುವುದು ವಿಶಿಷ್ಟಾಧ್ವೈತವು
ಜೀವಬ್ರಹ್ಮಗಳಲಿ ಬೇಧವಿಹುದೆನುವುದು ಧ್ವೈತವು
ಎಲ್ಲ ತತ್ವೋಪದೇಶಗಳು ಮುಕ್ತಿಯೆಡೆಗೊಯ್ಯುವವು
 
ಸಾಧಕರು ಸಾಧನಾನುಭವದಿ ತತ್ವಗಳ ನುಡಿದಿಹರು
ಇದರರ್ಥಗಳನರಿಯದೆ ತರ್ಕಗಳನು ನೀ ಮಾಡದಿರು
ಗುಡಿಯಡೆಗೆ ಇರುವ ದಾರಿಗಳೆಲ್ಲ ಗುಡಿ ಸೇರುವಂತೆ  
ತತ್ವಗಳೆಲ್ಲವು ಮುಕ್ತಿಯ ಪಡೆಯಲಿರುವ ಪಥಗಳಂತೆ
 
ಸಾಧಕರ ತತ್ವಗಳ ಸರಿ ಅರ್ಥಗಳ ಮೊದಲರಿಯಬೇಕು
ಇದನರಿಯೆ ಶ್ರೀ ನರಸಿಂಹನ ಕೃಪೆಯೂ ನಮಗಿರಬೇಕು  

ಮೆಚ್ಚುಗೆ-ತೆಗಳಿಕೆ (ಶ್ರೀ ನರಸಿಂಹ 45)

ರಚನೆ : ಸತೀಶ ತುಮಕೂರು


ಮರುಗುವುದು ಮನ ಮೆಚ್ಚುತ್ತಿಲ್ಲ ಜಗವೆನ್ನ ಎನಿಸಿ
ಗೈದ ಕಾರ್ಯಗಳಿಗೆ ಹೊಗಳಿಕೆಯನದು ಬಯಸಿ
ತೆಗಳಿಕೆಗಳನು ಸಹಿಸದೆ ಮನಸು ಕೊರಗುವುದು
ಮೆಚ್ಚಿಸಬೇಕಿದೆ ಜಗವನೆನುತಲಿ ಪರಿತಪಿಸುವುದು
 
ಮೆಚ್ಚಬೇಕೆನ್ನನೆಂದು ನೀ ಕರ್ಮಗಳ ಮಾಡದಿರು
ಜಗವನೆಲ್ಲ ಮೆಚ್ಚಿಸಲಾಗದೆಂಬುವುದನು ಅರಿತಿರು  
ಮೆಚ್ಚುಗೆ,ತೆಗಳಿಕೆಗಳಿಗೆ ಸ್ಪಂದಿಸದಿರಲಿ ಮನಸು
ತೆಗಳಿಕೆಗಳಿಗಂಜದೆ ಸತ್ಕರ್ಮಗಳನೇ ಆಚರಿಸು
 
ಮೆಚ್ಚುಗೆ,ತೆಗಳಿಕೆಗಳೇನೆ ಬರಲಿ ಸನ್ಮಾರ್ಗದಿ ಮನಸನಿಡು
ಕೈ ಬಿಡದೆ ಸಲಹುವನು ಶ್ರೀ ನರಸಿಂಹ ಶಂಕೆಯನು ಬಿಡು

ಸಾಧನೆಯ ಹಾದಿ (ಶ್ರೀ ನರಸಿಂಹ 44)



ರಚನೆ :ಸತೀಶ ತುಮಕೂರು 


ಹಿಂದೆ ನೋಡೊಮ್ಮ ನೀ,ಏನ ಸಾಧಿಸಿಹೆ ಜೀವನದಲ್ಲಿ
ಶೂನ್ಯವೆ ತುಂಬಿಹುದು,ಬರಿದೆ ಕಾಲಕಳೆದಿಹೆ ನೀ ಇಲ್ಲಿ
ಹಣೆಬರಹವೆ ಕಾರಣವೆನುತ ದೂಷಿಸುತಲಿ ಎಲ್ಲದಕು
ಸಂತೆಯೊಳು ಸುಮ್ಮನೆ ತಿರುಗಿದಂತಾಗಿಹುದಿ ಬದುಕು

ಕಳೆದ ಕಾಲವದು ಮರಳಿ ಬಾರದು ನೀ ಚಿಂತಿಸಿದರು
ಆತ್ಮ ಸಾಕ್ಷಾತ್ಕಾರ ಸಾಧನೆಯೆಡೆಗಡಿಯಿಡಿನ್ನಾದರು
ಹಣೆಬರಹವೆಂಬುದು ಇದ್ದಂತೆ ಇರಲಿ ಚಿಂತೆಯ ಬಿಡು
ಪ್ರಾಪ್ತ ಕರ್ಮಗಳ ಮಾಡುತ,ಶ್ರೀಹರಿ ಧ್ಯಾನ ಮಾಡು

ಸ್ಮರಿಸು ಇನ್ನಾದರೂ ಅನವರತ ಇಷ್ಟದೈವದ ನಾಮವನು
ಜಪಿಸಲು ತೋರುವನು ಶ್ರೀನರಸಿಂಹ ಮುಕ್ತಿ ಮಾರ್ಗವನು